New Posts

recent

ಮರೆಯಾಗುತಿದೆ ಖುಷಿಯ ಕ್ಷಣಗಳು

"ಅಮ್ಮ ಬಪ್ಪಗ ಮೆಡಿ ಉಪ್ಪಿನಕಾಯಿ ತೆಕ್ಕೊಂಡು ಬಾ" ಅಂತ ಬೆಂಗಳೂರಿನ ಮನೆಯಲ್ಲಿ ಕುಳಿತ ಮಗಳು ಅಮ್ಮನ ಬಳಿ ಹೇಳುತ್ತಿರುತ್ತಾಳೆ.
" ಈ ಸರ್ತಿ ಹಲಸಿನ ಹಪ್ಪಳ ಮಾಡಿದ್ದಿಲ್ಲೆಯ ಅಪ್ಪಾ" ಅಂತ ಮಗ ಕೇಳುತ್ತಿರುತ್ತಾನೆ.
ರಜೆಗೆಂದು ಊರಿಗೆ ಬಂದ ಮಕ್ಕಳು, ತಿರುಗಿ ಹೋಗುವಾಗ ಉಪ್ಪಿನಕಾಯಿ, ಹಪ್ಪಳ, ಪತ್ರೊಡೆ, ಚಟ್ನಿಪುಡಿ ಇತ್ಯಾದಿಗಳ ದೊಡ್ಡ ಗಂಟನ್ನೇ ತೆಗೆದುಕೊಂಡು ಹೋಗುತ್ತಾರೆ. ಆದರೆ ಅದನ್ನು ಮಾಡುವ ವಿಧಾನವನ್ನಲ್ಲ.
ಟಿವಿಯ ಮುಂದೆ ಕುಳಿತು ಹಪ್ಪಳವನ್ನು ಸವಿಯುವ ಮಗನಿಗೆ ಅದರ ತಯಾರಿಯ ಕೆಲಸ, ಅದರ ಖುಷಿ ಸಂತೋಷದ ಕ್ಷಣಗಳ ಅನುಭವವೇ ಇರುವುದಿಲ್ಲ.

ಹಿಂದಿನ ದಿನಗಳಲ್ಲಿ ಮಳೆಗಾಲದ ಆರಂಭದಲ್ಲಿ ಒಂಚೂರು ಬಿಸಿಲು ಬಂತೆಂದರೆ ಸಾಕು ಮನೆ ಮಂದಿಯೆಲ್ಲ ತಯಾರಾಗುತ್ತಿದ್ದರು. ಮನೆಯ ಗಂಡಸರು ತಂದ ಹಲಸಿನ ಕಾಯಿಯ ತೊಳೆ ಬಿಡಿಸಿ ಬೇಯಿಸಿದ ಅಮ್ಮ , ಕಡೆಯಲು ಕಲ್ಲಿನಲ್ಲಿ ಹಾಕಿದರೆ, ನಾ ಮುಂದು ತಾ ಮುಂದು ಎಂದು ಹಿರಿ ಕಿರಿಯರೆಲ್ಲ ಸೇರಿ ಕಡೆಯುವ ಕಲ್ಲನ್ನ ತಿರುಗಿಸುವ ಖುಷಿಯೇ ಬೇರೆ. ಸಿದ್ಧವಾದ ಹಿಟ್ಟನ್ನು ಒತ್ತುವ ಕೆಲಸ ಮನೆ ಮಕ್ಕಳಿಗಂತು ಮಜವೋ ಮಜ. ಕೆಲವು ದಪ್ಪ ಹಪ್ಪಳಗಳಾದರೆ ಮತ್ತೆ ಕೆಲವು ಬಿಡಿಸಲೇ ಬಾರದಷ್ಟು ತೆಳು. ನಡು ನಡುವೆ ಮಕ್ಕಳ ಹೊಟ್ಟೆ ಸೇರುವ ಹಿಟ್ಟು. ಮುಂದೆ ಕಣ್ಣು ಮುಚ್ಚಾಲೆಯಾಡುವ ಸೂರ್ಯನ ಆಟಕ್ಕೆ ತಕ್ಕಂತೆ ಒಳಗೆ ಹೊರಗೆ ಇಡುತ್ತಾ ಹಪ್ಪಳವನ್ನು ಒಣಗಿಸುವ ಕಾಯಕ. ಹೀಗೆ ಪೂರ್ತಿ ಪ್ರಕ್ರಿಯೆ ಖುಷಿ ಸಂತೋಷಗಳ ಕಣಜವಾಗಿತ್ತು. ಅವಿಭಕ್ತ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಆ ಕ್ಷಣವನ್ನ ಆನಂದದಿಂದ ಕಳೆಯುತ್ತಾ ಇದ್ದರು. ಮಳೆಗಾಲದಲ್ಲಿ ಕಟ್ಟಿಟ್ಟ ಹಪ್ಪಳವನ್ನ ಬಿಚ್ಚಿ, ಒಲೆಯಲ್ಲಿ ಉರಿಯುವ ಕೆಂಡದಲ್ಲಿ ಸುಟ್ಟು, ಬಿಸಿ ಬಿಸಿಯಾಗಿ ತಿನ್ನುವಾಗಿನ ಮಜ ಅಂಗಡಿಯಲ್ಲಿ ಕೊಂಡ ಚಿಪ್ಸ್ ಪ್ಯಾಕೆಟ್ನಲ್ಲಿ ದೊರಕಲು ಸಾಧ್ಯವೇ ಇಲ್ಲ.
ಯಂತ್ರದ ಮೂಲಕ ತಯಾರಿಸಿ ಮನೆ ಬಾಗಿಲಿಗೆ ಬರುವ ಹಪ್ಪಳ, ಸಂಡಿಗೆ, ಚಿಪ್ಸ್ ಮುಂತಾದವುಗಳಲ್ಲಿ ಈ ರೀತಿಯ ಅನುಭವಗಳು ದೊರಕುವುದೇ ಇಲ್ಲ.
[post_ad]
ಹಾಗಾದರೆ ನಾವೆಲ್ಲಿ ಎಡವುತ್ತಿದ್ದೇವೆ? ಸಿದ್ಧ ಉತ್ಪನ್ನಗಳ ಹಿಂದೆ ಬಿದ್ದು, ಸಂತೋಷದ ಕ್ಷಣಗಳನ್ನ ಕಳೆದುಕೊಳ್ಳುತ್ತಿದ್ದೇವೆ. ಮೊನ್ನೆ ಒಬ್ಬ ಸಂಬಂಧಿಕರ ಮನೆಗೆ ಹೋದವನು ಊಟಕ್ಕೆ ಬಡಿಸಿದ ಕೊಂಡುತಂದ ಉಪ್ಪಿನಕಾಯಿಯನ್ನು ನೋಡಿ ಕೇಳಿಯೇ ಬಿಟ್ಟೆ "ಏನು ಈ ಬಾರಿ ಉಪ್ಪಿನಕಾಯಿ ಹಾಕಿಲ್ಲವಾ" ಅಂತ. ಅದಕ್ಕೆ ಅವರು ನೀಡಿದ ಉತ್ತರ "ಅಯ್ಯೋ ಅದೇನು ಕೇಳ್ತಿ, ಮಾವಿನ ಮಿಡಿ ಕೊಯ್ಲಿಕೆ ಜನ ಸಿಗದೆ ಹಾಗೇ ಮರದಲ್ಲಿ ಉಳೀತು. ಮಿಡಿ ಕೊಂಡು ತಂದ್ರೆ ಅದರ ಕೆಲಸವನ್ನೆಲ್ಲಾ ಮಾಡುವವರು ಯಾರು. ಮಗ ಸೊಸೆ ಇಬ್ರೂ ಬೆಂಗ್ಳೂರಲ್ಲಿ ಕೆಲಸದಲ್ಲಿದ್ದಾರೆ. ಇನ್ಯಾರು ಮಾಡೋದು ಇದನ್ನೆಲ್ಲಾ".

ನಮ್ಮೂರ ಕೆರೆ ಬಾವಿಗಳಲ್ಲಿ ಸಮೃದ್ಧವಾಗಿ ತುಂಬಿ ಹರಿಯುವ ನೀರನ್ನು ಬಿಟ್ಟು, ಪಟ್ಟಣಗಳಲ್ಲಿ ಹಣ ಕೊಟ್ಟು ನೀರನ್ನು ಬಳಸುವ ಸ್ಥಿತಿ ಬಂದೊದಗಿದೆ. ಹಳ್ಳಿಯ ಶುದ್ಧ ಗಾಳಿ ಆಹಾರವನ್ನು ಬಿಟ್ಟು, ಶಹರದ ಆಸ್ಪತ್ರೆಗಳಲ್ಲಿ ಆರೋಗ್ಯವನ್ನು ಹುಡುಕುತ್ತಿದ್ದಾರೆ ಜನ. ಸಂಬಂಧಗಳೆಲ್ಲಾ ಅಪ್ಪ ಅಮ್ಮ ಎಂಬ ಅಕ್ಷರಗಳಿಗೆ ಸೀಮಿತವಾಗುತ್ತಿದೆ.

ನಮ್ಮೆಲ್ಲಾ ಬದುಕಿನ ಜಂಜಾಟಗಳ ನಡುವೆ ಒಮ್ಮೆ ನಮ್ಮ ಹಳ್ಳಿಯ ಮನೆಗಳೆಡೆಗೆ ಹಿಂತಿರುಗಿ ನೋಡೋಣ. ತಿಂಗಳಿಗೊಂದು ಬಾರಿಯಾದರೂ ಎಲ್ಲರೂ ಸೇರಿ ಖುಷಿಯ ಕ್ಷಣಗಳನ್ನ ಕಳೆಯೋಣ. ಆ ಮೂಲಕ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಆಚಾರ, ಆಹಾರ ಪದ್ದತಿಯ ಜ್ಞಾನ ಭಂಡಾರವನ್ನು ನೀಡೋಣ. ಯಾಕಂದ್ರೆ ಸಂತೋಷ, ಆರೋಗ್ಯ, ಸಂಬಂಧಗಳು, ಇವುಗಳನ್ನೆಲ್ಲಾ ಹಣ ಕೊಟ್ಟು ಕೊಳ್ಳಲು ಆಗುವುದಿಲ್ಲ ಅಲ್ಲವೇ?
ಮರೆಯಾಗುತಿದೆ ಖುಷಿಯ ಕ್ಷಣಗಳು Reviewed by Murali Kadava on 10:01:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.