New Posts

recent

ಭವಿಷ್ಯದೆಡೆಗೊಂದು ಭರವಸೆಯ ನೋಟ....!!!!


“ಅಪ್ಪ ನಾನು ಇಂಜಿನಿಯರಿಂಗ್ ಮಾಡ್ತೇನೆ” ಎಂದ ಮಗನ ಮಾತು ಕೇಳಿದ ಅಪ್ಪನ ಮನದಲ್ಲಿ ನೂರಾರು ಯೋಚನೆ.
ಮಳೆಗಾಲದಲ್ಲಿ ಅಡಿಕೆ ಮರಕ್ಕೆ ಔಷದಿ ಸಿಂಪಡಿಸುವ ಕಾರ್ಯ, ತೋಟದಲ್ಲಿ ಸಾಗಾಣಿಕಾ ಕಾರ್ಯ, ಅಡಿಕೆ ಸುಲಿಯುವ ಕೆಲಸ ಮುಂತಾದ ಕೃಷಿ ಕೆಲಸಗಳನ್ನು ಸುಲಭವಾಗಿ ಮಾಡಲು, ಮಗ ಕಲಿಯುವ ವಿದ್ಯೆ ಪರಿಹಾರ ಒದಗಿಸಬಹುದೇನೋ ಎನ್ನುವ ಆಶಾಭಾವನೆ.
ಹಾಗೆ  ‘ಇಂಜಿನೀರಿಂಗ್’ ಸೇರಿದ ಮಗ ಕಲಿತು,  ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಿ ಬೆಂಗಳೂರಿಗೋ ವಿದೇಶಕ್ಕೋ ಹಾರಿದಾಗ, ಅಪ್ಪ ಕೊಳೆತು ಬೀಳುತ್ತಿರುವ ಅಡಿಕೆಯನ್ನ ಅಂಗಳದಲ್ಲಿ ಸುರಿಯುತ್ತಿರುತ್ತಾನೆ.

ಸಾವಿರಾರು ಮೀಟರ್ ಎತ್ತರದಲ್ಲಿ ಹಾರುವ ವಿಮಾನವನ್ನು ಡಿಸೈನ್ ಮಾಡುವ ಅವನಿಗೆ, ತನ್ನವರ ಅಡಿಕೆ ಮರ ಏರುವ ಕಷ್ಟ ನೆನಪಾಗುವುದೇ ಇಲ್ಲ.
ದಿನ ಬೆಳಗಾದರೆ ಕಂಪ್ಯೂಟರ್ ಮುಂದೆ ಕುಳಿತು ‘ಪ್ರೋಗ್ರಾಮ್’ ಬರೆಯುವ ಹುಡುಗಿಗೆ ಊರಿನ ಜನರ ಪರದಾಟ ಅರಿವಾಗುವುದೇ ಇಲ್ಲ.
ಸ್ವಯಂಚಾಲಿತ (CNC) ಯಂತ್ರದ ಮುಂದೆ ಕುಳಿತು ಪೂರ್ತಿ ವಾಹನವನ್ನು ಜೋಡಿಸುವ ಮಗನಿಗೆ, ಅಪ್ಪನ ಅಡಿಕೆ ಸುಲಿಯುವ ಕಷ್ಟ ಕಾಣುವುದೇ ಇಲ್ಲ. ಆತನ ಗಮನವೆಲ್ಲಾ ತಿಂಗಳ ಕೊನೆಗೆ ದೊರೆಯುವ ದೊಡ್ಡ ಮೊತ್ತದ ಸಂಬಳದೆಡೆಗೆ..

ಇದಕ್ಕೆಲ್ಲ ಕಾರಣ ಹುಡುಕುತ್ತಾ ಹೋದರೆ ಪುನಃ ನಮ್ಮೆಡೆಗೆ ಬೊಟ್ಟು ಮಾಡುತ್ತದೆ ನಮ್ಮ ಬೆರಳು. ಹೌದು, ಒಬ್ಬ ಹುಡುಗ ಇಂಜಿನೀರಿಂಗ್ ಓದಿ ಮುಗಿಸಿ ಮನೆಯಲ್ಲಿ ಕುಳಿತು ತನ್ನವರ ಕೆಲಸದಲ್ಲಿ ಸಹಾಯ ಮಾಡುತ್ತೇನೆ ಅಂದುಕೊಂಡಾಗ,  “ಪಾಪ ಹುಡುಗನಿಗೆ ಕೆಲಸ ಸಿಗದೆ ಮನೆಯಲ್ಲೇ ಇದಾನೆ” ಅನ್ನುವ ಜನರ ಚುಚ್ಚು ಮಾತುಗಳು, ಬಹುರಾಷ್ಟ್ರೀಯ ಐಟಿ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸುವುದೇ ಜೀವನದ ಅತಿ ದೊಡ್ಡ ಸಾಧನೆ ಅನ್ನುವ  ಸಮಾಜ. ಪಕ್ಕದ ಮನೆಯಾತನಂತೆ ತಾನೂ ‘ಶಾಪಿಂಗ್ ಮಾಲ್’ಗಳಲ್ಲಿ ತಿರುಗಾಡಿ ಖರೀದಿಸಬೇಕೆಂಬ ಮನಸ್ಥಿತಿ. ಸರಕಾರಿ ಕೆಲಸಗಳಿಗೆ ಹಣ, ಜಾತಿ, ಪ್ರಭಾವಗಳನ್ನೆ ಮಾನದಂಡವಾಗಿಟ್ಟ ಸರ್ಕಾರ.

ಇದೇ ಕಾರಣದಿಂದ,  ಇಂದು ಹೆಚ್ಚಿನ ಮೆಕಾನಿಕಲ್ ಇಂಜಿನೀರಿಂಗ್ ಪದವೀಧರರು ಕೂಡ ಐಟಿ ಕಂಪೆನಿಯ ಕೆಲಸದತ್ತ ಕೈ ಚಾಚುತ್ತಿದ್ದಾರೆ. ವಿದೇಶಿ ಕಂಪನಿಗಳು ನಮ್ಮವರ ಪ್ರತಿಭೆಯನ್ನು ದೊಡ್ಡ ಮೊತ್ತದ ಸಂಬಳ ನೀಡಿ ಖರೀದಿಸುತ್ತಿವೆ.
ಹಳ್ಳಿಯ ಮನೆಗಳೆಲ್ಲಾ ಹೊಸ ತಲೆಮಾರುಗಳಿಲ್ಲದೆ ಗೆದ್ದಲು ಹಿಡಿಯುತ್ತಿವೆ. ಕೃಷಿ ಭೂಮಿಯು ಪೋಷಣೆಯಿಲ್ಲದೆ ಬಾಯ್ದೆರೆದು ನಿಂತಿದೆ. ಹಿರಿಯ ಜೀವಗಳು, ವಿದೇಶದಲ್ಲಿರುವ ಮಕ್ಕಳು ಕಳುಹಿಸುವ ಹಣದೊಡನೆ ಮಾತನಾಡುವ ಪರಿಸ್ಥಿತಿ ಬಂದಿದೆ.
ಇದಕ್ಕೆಲ್ಲ ತಕ್ಕ ಉತ್ತರ ಅವರವರ ಮನದಲ್ಲೇ ಮೂಡಬೇಕು. ಸಮಾಜ ಆರಂಕಿಯ ಸಂಬಳ ಗಳಿಸುವುದೇ ವಿದ್ಯಾರ್ಜನೆಯ ಗುರಿ ಎಂಬ ಅಂಧಶ್ರದ್ಧೆಯಿಂದ ಹೊರಬರಬೇಕು. ತಾನು ಕಲಿತ ವಿದ್ಯೆಯಿಂದ ತನ್ನ ಮನೆಯ, ತನ್ನೂರಿನ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬ ಯೋಚನೆಯನ್ನು ಪ್ರತಿಯೊಬ್ಬರು ಮಾಡಬೇಕು.

By: Murali Kadava
ಭವಿಷ್ಯದೆಡೆಗೊಂದು ಭರವಸೆಯ ನೋಟ....!!!! Reviewed by Unknown on 06:30:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.