New Posts

recent

ರಾಮ ನಾಮದ ನೆನಪುಗಳು


ಸಾಮಾನ್ಯವಾಗಿ ಚಿಕ್ಕ ಮಕ್ಕಳು ಕತ್ತಲಿಗೆ ಹೆದರುವಷ್ಟು ಮತ್ಯಾವುದಕ್ಕೂ ಹೆದರುವುದಿಲ್ಲ. ನಾನೂ ಅಷ್ಟೆ, ಚಿಕ್ಕವನಿದ್ದಾಗ ರಾತ್ರಿ ಮಲಗಿದಾಗ ಕಣ್ಣು ಮುಚ್ಚಿದರೂ ಕತ್ತಲೆ, ತೆರೆದರೂ ಕತ್ತಲೆ. ಜಗತ್ತಿನ ಎಲ್ಲಾ ಚರಾಚರ ವಸ್ತುಗಳು ಮಾಯವಾದ ಅನುಭವ. ಇನ್ನು ಆ ಹೆದರಿಕೆಯಲ್ಲಿ ನಿದ್ದೆ ಎಲ್ಲಿಂದ ಬರಬೇಕು. ಅಂತಹ ಸಮಯದಲ್ಲೇ ಹಿರಿಯರು ಹೇಳಿಕೊಟ್ಟ ಶಬ್ಧ 'ರಾಮನಾಮ'. ಕಣ್ಣು ಮುಚ್ಚಿ "ರಾಮ ರಾಮ" ಅಂತ ಗುನುಗುತ್ತಿದ್ದರೆ, ಅದು ಕಿವಿಯಿಡೀ ಪ್ರತಿಧ್ವನಿಸಿ ನನ್ನನ್ನ ನಿದ್ರಾ ಲೋಕಕ್ಕೆ ಎಳೆದೊಯ್ಯುತ್ತಿತ್ತು. ಮತ್ತೆ ಬೆಳಗ್ಗೆ ಅಮ್ಮ ಎಬ್ಬಿಸಿದಾಗಲೆ ಎಚ್ಚರವಾಗುತ್ತಿತ್ತು.

ಮುಂದೆ ಬೆಳೀತಾ ಓದಲು ಕಲಿತು, ವಿವಿಧ ಮಕ್ಕಳ ಪುಸ್ತಕಗಳಲ್ಲಿ ಹಾಗು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ದಾರಾವಾಹಿಯಲ್ಲಿ ಹನುಮಂತ " ಜೈ ಶ್ರೀರಾಮ್ " ಎಂದು ಆಕಾಶದೆತ್ತರಕ್ಕೆ ಹಾರುವುದನ್ನು ನೋಡಿದಾಗ, ನಾನೂ ಅವನಂತೆ " ಜೈ ಶ್ರೀರಾಮ್ " ಎನ್ನುತ್ತಾ  ಹಾರಲು ಪ್ರಯತ್ನಿಸಿದ ಕ್ಷಣ ಮರೆಯಲಸಾಧ್ಯ.

ಹೀಗೆ ಚಿಕ್ಕ ಚಿಕ್ಕ ಕಥೆಗಳಲ್ಲಿ ರಾಮ, ಲಕ್ಷ್ಮಣ, ಹನುಮರನ್ನು ನೋಡುತ್ತಿದ್ದ ನನಗೆ ಪೂರ್ತಿಯಾಗಿ ಅವರ ಬಾಲ್ಯವನ್ನು ಪರಿಚಯಿಸಿದ್ದು 'ಎಳೆಯರ ರಾಮಾಯಣ' ಎಂಬ ಕಿರು ಪುಸ್ತಕ. ರಾಮ ಲಕ್ಷ್ಮಣರು ವಿಶ್ವಾಮಿತ್ರರೊಡಗೂಡಿ ದುಷ್ಟ ಸಂಹಾರ ಮಾಡುವ ಕತೆಯನ್ನ ಓದುತ್ತಿದ್ದರೆ, ಕೆಲವೇ ಕ್ಷಣಗಳಲ್ಲಿ ನನ್ನ ಮನಸ್ಸು ತ್ರೇತಾಯುಗದ ಆ ದೃಶ್ಯದಲ್ಲಿ ಒಂದಾಗಿ ಬಿಡುತ್ತಿತ್ತು. ಯಾವುದೋ ಲೋಕದಲ್ಲಿ ನೆಲೆಸಿರುವ ಸರ್ವಶಕ್ತ ದೇವರು, ನಮ್ಮಂತೆ ಈ ಭೂಮಿಯಲ್ಲಿ ಆಡಿ ಬೆಳೆದರು ಎನ್ನುವುದನ್ನು ಕೇಳಿದಾಗ ಆಶ್ಚರ್ಯದಲ್ಲಿ ಮುಳುಗಿ ಹೋಗಿದ್ದೆ.

ಆ ಬಾಲ್ಯ ಕಾಲದಲ್ಲಿ ಕಷ್ಟಗಳೆದುರಾದಾಗ ನೆನಪಾಗುತ್ತಿದ್ದುದು ರಾಮ ನಾಮ. ಈಜು ಕಲಿಯಲೆಂದು ಕೆರೆಯ ನೀರಿಗೆ ಧುಮುಕಿದಾಗ ಧೈರ್ಯ ತುಂಬುತ್ತಿದ್ದುದು ಬಾಯಿಯಿಂದ ಹೊರಬರುತ್ತಿದ್ದ ರಾಮ ನಾಮ. ತರಗತಿಯಲ್ಲಿ ಶಿಕ್ಷಕರ ಕೈಯಿಂದ ಏಟು ತಿನ್ನುವಾಗಿನ ನೋವನ್ನ ಮರೆಸುತ್ತಿದ್ದುದು ರಾಮ ನಾಮ. ಹೀಗೆ ಕಷ್ಟಗಳೆದುರಾದಾಗ ಶಕ್ತಿಯನ್ನ ಕೊಡುತ್ತಿದ್ದುದು ರಾಮ ಎಂಬ ಎರಡಕ್ಷರಗಳು.

ಹೀಗೆ ಬೆಳೆಯುತ್ತಾ ಬುದ್ಧಿ ಬಲಿತಾಗ, ಆ ಎರಡಕ್ಷರವೇ ಆದರ್ಶವಾಗಿ ದಾರಿದೀಪವಾಯಿತು. ಆತನ ಜೀವನ ಬರೇ ಕಥೆ ಅಥವಾ ಮಹಾಕಾವ್ಯವಲ್ಲ, ಬದಲಿಗೆ ನಮ್ಮ ಜೀವನದ ಪ್ರತಿ ಹೆಜ್ಜೆಗೂ ದಾರಿದೀಪವಾಗಬಲ್ಲದು. ಆ ಮಹಾಕಾವ್ಯದ ಅನೇಕ ಪಾತ್ರಗಳು ನಮ್ಮ ಜೀವನದಲ್ಲಿಯೂ ಬಂದು ಹೋಗುತ್ತದೆ. ಅನೇಕ ಬದಲಾವಣೆಗಳನ್ನು ತರುತ್ತದೆ. ಬರುವ ಎಲ್ಲಾ ಬದಲಾವಣೆಗಳಿಗೆ ಒಗ್ಗಿಕೊಂಡು, ಎಷ್ಟು ಬಾರಿ ಬಿದ್ದರೂ ಮತ್ತೆದ್ದು ನಿಲ್ಲುವ ಶಕ್ತಿಯನ್ನು ನೀಡಬಲ್ಲದು ರಾಮ ನಾಮ ಮತ್ತು ಆತನ ಆದರ್ಶ.
ರಾಮ ನಾಮದ ನೆನಪುಗಳು Reviewed by Murali Kadava on 11:17:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.