ಕೃಷ್ಣನೊಡನೆ ಒಂದು ಪಯಣ
ನಡು ರಾತ್ರಿಯ ನೀರವ ಮೌನದಲ್ಲಿ ಒಬ್ಬನೇ ರಸ್ತೆಯುದ್ದಕ್ಕೂ ನಡೆಯುತ್ತಾ ಸಾಗುತ್ತಿದ್ದೆ. ತಲುಪಬೇಕಾದ ಗುರಿ ಇನ್ನೂ ಬಹಳ ದೂರದಲ್ಲಿತ್ತು. ಈ ದೂರದ ಪ್ರಯಾಣದಲ್ಲಿ ಯಾರಾದರು ಜತೆಗಾರರಿದ್ದರೆ ಚೆನ್ನಾಗಿತ್ತು ಅಂತ ಮನಸ್ಸಲ್ಲೇ ಅಂದುಕೊಂಡು ನಡೆಯುತ್ತಾ ಇದ್ದೆ. ಆಗಲೇ ದೂರದಲ್ಲೊಂದು ಮನುಷ್ಯಾಕೃತಿ ನಡೆದು ಬರುವುದು ಕಾಣಿಸಿತು. ಆ ಕಗ್ಗತ್ತಲ ರಾತ್ರಿಯಲ್ಲಿ ಹುಣ್ಣಿಮೆಯ ಚಂದ್ರನಂತೆ ನನ್ನತ್ತಲೇ ನಡೆದು ಬರುತ್ತಿತ್ತು ಆ ಆಕೃತಿ. ಇದು ಯಾರಪ್ಪಾ ಅಂತ ಹತ್ತಿರ ಹೋಗಿ ನೋಡಿದಾಗ, ನನ್ನದೇ ವಯಸ್ಸಿನ ಒಬ್ಬ ಯುವಕ. ದೇಹವಿಡೀ ನೀಲವರ್ಣ, ಕೈಯಲ್ಲೊಂದು ಬಿದಿರಿನ ಸಣ್ಣ ಕೋಲು, ತಲೆಯಲ್ಲಿ ನವಿಲಿನ ಗರಿಯ ಸಿಂಗಾರ. ಮುಖದ ತುಂಬಾ ಮುಗುಳ್ನಗು ಹೊತ್ತು ನನ್ನೆದುರು ನಿಂತ. ಅವನ ವೇಷ ನೋಡಿ ಉಕ್ಕಿ ಬಂದ ನಗುವನ್ನು ನಿಯಂತ್ರಿಸಿಕೊಂಡು ಕೇಳಿದೆ.
"ಯಾರು ನೀನು"?
"ನಿನ್ನಂತೆ ಒಬ್ಬಂಟಿಯಾಗಿ ಸಾಗುವವರಿಗೆ ಗೆಳೆಯನೂ ನಾನೆ, ಗುರುವೂ ನಾನೆ, ಮಾರ್ಗದರ್ಶಕನೂ ನಾನೆ" ಅಂತ ಸುಮಧುರವಾದ ಸ್ವರ ತೇಲಿ ಬಂತು ಅವನ ಕಂಠದಿಂದ.
ಅಬ್ಬ, ಕೊನೆಯವರೆಗೂ ಒಬ್ಬನೇ ನಡೆಯಬೇಕಲ್ಲಾ ಅಂದುಕೊಂಡಿದ್ದೆ. ಇವನಾದರೂ ಸಿಕ್ಕನಲ್ಲ ಅಂತ ಕೇಳಿದೆ,
"ಅದು ಸರಿ ಇದೇನು ನಿನ್ನ ವೇಷ, ಈ ನೀಲ ಬಣ್ಣ, ಬಿದಿರರಿನ ಕೋಲು, ನವಿಲ ಗರಿ ಎಲ್ಲಾ"
" ನೀನು ಹೇಗೆ ನನ್ನನ್ನು ನಿನ್ನ ಮನದಲ್ಲಿ ಚಿತ್ರಿಸಿಕೊಂಡಿರುವೆಯೋ ಹಾಗೇ ಕಾಣುತ್ತೇನೆ ನಾನು. ಕೆಲವರಿಗೆ ಬೆಣ್ಣೆಯ ಗಡಿಗೆಯ ಮುಂದೆ ಕುಳಿತ ಮಗುವಿನಂತೆ ಕಂಡರೆ, ಮತ್ತೆ ಕೆಲವರರಿಗೆ ಗೋವುಗಳ ಕಾಯುವ ಗೋಪಾಲಕನಂತೆ, ಗೋಪಿಕೆಯರ ಜೊತೆ ನಲಿದಾಡುವ ನವ ಯುವಕನಂತೆ, ಯುದ್ಧ ರಂಗದಲ್ಲಿ ಕಾದಾಡುವ ವೀರನಂತೆ. ಹೀಗೆ ಅವರವರ ಭಾವಕ್ಕೆ ತಕ್ಕಂತೆ ನೂರಾರು ವೇಷಗಳ ಪಾತ್ರಧಾರಿ ನಾನು."
ಇದೇನು ವಿಚಿತ್ರವಾಗಿ ಮಾತಾಡ್ತಾ ಇದ್ದಾನೆ. ಅಂದುಕೊಡು.
"ಅದೇನೆ ಇರ್ಲಿ ಈಗ ಮಾತ್ರ ನನಗೆ ನೀನು ಗೆಳೆಯ ಅಷ್ಟೇ. ಮತ್ತೆ ನಿನ್ನ ಹೆಸರೇ ಹೇಳಲಿಲ್ಲ ನೀನು."
" ನನ್ನ ಪ್ರತಿಯೊಂದು ಪಾತ್ರಕ್ಕೂ ನೂರಾರು ಹೆಸರುಗಳು. ಎಲ್ಲದರಲ್ಲಿಯೂ ಇರುವುದು ನಾನೊಬ್ಬನೆ. ನೀನು ಹೇಗೆ ಕರೆದರೂ ಅದರಲ್ಲಿ ನಾನಿದ್ದೇನೆ."
ಇವನ ವ್ಯಕ್ತಿತ್ವ ಇನ್ನೂ ಕ್ಲಿಷ್ಟವಾಗುತ್ತ ಹೋಯಿತು. ಈಗ ಹೆಸರಿಗಾಗಿ ತಡಕಾಡುವ ಪರಿಸ್ಥಿತಿ ನನ್ನದು.
ಸರಿ ಹಾಗಾದರೆ, ನಾನು ಚಿಕ್ಕವನಿದ್ದಾಗ ನನ್ನ ಅಮ್ಮ ಕಥೆಗಳನ್ನ ಹೇಳುತ್ತಿದ್ದರು. ಅದರಲ್ಲೊಬ್ಬ ನಿನ್ನ ಹಾಗೇ ಇದ್ದ. ಅವನ ಹೆಸರು ಕೃಷ್ಣ ಅಂತ. ಅದೇ ಹೆಸರಿನಿಂದ ನಿನ್ನನ್ನು ಕರೆಯುತ್ತೇನೆ. ಮತ್ತೆ ನನ್ನ ಹೆಸರು ಮಾಧವ ಅಂತ. ಎಲ್ಲರೂ ಮಾಧು ಅಂತ ಕರೆಯುತ್ತಾರೆ. "
"ಓಹೋ, ಹಾಗಾರೆ ನಿನ್ನಲ್ಲೂ ಇರುವುದು ನಾನೆ"
" ಸಾಕು ಸಾಕು ಬಿಟ್ರೆ ಇಡೀ ಜಗತ್ತೆಲ್ಲ ನಾನೆ ಅಂತ ಹೇಳ್ತೀಯ ನೀನು."
ಹಾಗೆ ಮುಂದೆ ಸಾಗುತ್ತಿರುವಾಗ ತಟ್ಟನೆ ಇನ್ನೊಂದು ಪ್ರಶ್ನೆ ಕೇಳಿದೆ.
" ಸರಿ ಏನಾದ್ರು ಕೆಲಸ ಕಾರ್ಯ ಮಾಡ್ತಾ ಇದ್ದೀಯ" ಅಂತ.
" ನನಗೊಂದು ದೊಡ್ಡದಾದ ಕುಟುಂಬವಿದೆ. ನಿನ್ನ ಕಣ್ಣಿಗೆ ಕಾಣದ ವಸ್ತುವಿನಿಂದ ಹಿಡಿದು ಅನಂತದಾಚೆಗೆ ಹಬ್ಬಿಕೊಂಡಿರುವ ಸಕಲ ಚರಾಚರ ವಸ್ತುಗಳೆಲ್ಲ ನನ್ನ ಕುಟುಂಬದ ಸದಸ್ಯರು. ಅವರೆಲ್ಲರ ಪಾಲನೆ, ಪೋಷಣೆ ನನ್ನ ಹೊಣೆ."
ಓಹೋ, ಹಾಗಾದ್ರೆ ಒಳ್ಳೆ ಶ್ರೀಮಂತನೇ ಇರಬೇಕು ಈತ ಅಂತ ಅನ್ಕೊಂಡೆ.
" ಹಾಗದ್ರೆ ಚೆನ್ನಾಗಿ ಸಂಪಾದನೆ ಮಾಡ್ತೀಯ ಅಲ್ವಾ."
" ನನಗೆ ಪ್ರತಿಫಲ ನೀಡುವಷ್ಟು ಶ್ರೀಮಂತರು ಯಾರೂ ಇಲ್ಲ, ನಾನದನ್ನು ಬಯಸುವುದೂ ಇಲ್ಲ. ಪ್ರೀತಿಯಿಂದ, ಪರಿಶುದ್ಧ ಹೃದಯದಿಂದ ಕೊಟ್ಟ ಪತ್ರೆ, ಪುಷ್ಪ, ಫಲ, ನೀರು ಹೀಗೆ ಏನು ಕೊಟ್ಟರೂ ಸಂತೋಷದಿಂದ ಸ್ವೀಕರಿಸುತ್ತೇನೆ."
ಆತ ಹಾಗೆ ಹೇಳುತ್ತಲೆ ನನಗೆ ಹಸಿವಾಗತೊಡಗಿತು. ಅಮ್ಮ ಮನೆಯಿಂದ ಕೊಟ್ಟ ಬುತ್ತಿ ಚೀಲದಲ್ಲಿತ್ತು. ಅದನ್ನ ಬಿಡಿಸಿ ನೋಡಿದರೆ ಒಂದಷ್ಟು ಅವಲಕ್ಕಿ ಮಾತ್ರ ಇತ್ತು.
" ನೀನು ಅವಲಕ್ಕಿ ತಿಂತೀಯ ಅಲ್ವಾ" ಅಂತ ಕೇಳಿದೆ.
" ಅವಲಕ್ಕಿಯಾ! ಅದು ನನಗೆ ತುಂಬಾ ಇಷ್ಟ. ನನ್ನ ಇನ್ನೊಬ್ಬ ಗೆಳೆಯ ಸುಧಾಮ ಯಾವಾಗಲೂ ತರುತ್ತಿದ್ದ ಅದನ್ನ."
ಸರಿ ಅಂತ ಇಬ್ಬರೂ ಸೇರಿ ಪೂರ್ತಿ ಬುತ್ತಿಯನ್ನ ಖಾಲಿ ಮಾಡಿದೆವು. ನಂತರ ನಾಳೆಗೇನು ಎಂಬ ಚಿಂತೆ ಶುರುವಾಯ್ತು ನನ್ನಲ್ಲಿ.
ತಕ್ಷಣ ಕೃಷ್ಣ " ಬುತ್ತಿ ಪೂರ್ತಿ ಖಾಲಿಯಾಗಿದೆಯಲ್ಲ, ತೊಂದರೆಯಿಲ್ಲ ಬಿಡು. ಅದನ್ನು ನಿನ್ನ ಚೀಲದಲ್ಲಿ ಇಟ್ಟು ಬಿಡು ನಾಳೆಗೆ ಅದು ಅಕ್ಷಯವಾಗುತ್ತದೆ"
ಹಾಗೆ ಮುಂದೆ ಸಾಗುತ್ತಾ ಕೇಳಿಯೇಬಿಟ್ಟೆ ಇನ್ನೊಂದು ಪ್ರಶ್ನೆ.
" ನಿನಗೆ ವಿವಾಹವೇನಾದರೂ ಆಗಿದೆಯೇ" ಅಂತ.
" ಯಾರು ನನ್ನನ್ನು ಪವಿತ್ರ ಹೃದಯದಿಂದ ಪ್ರೀತಿಸುತ್ತಾರೊ ಅವರೆಲ್ಲರ ಸಖ ನಾನು. ನಾನು ಎಲ್ಲರೊಡನೆಯೂ ಎಂದೆಂದೂ ಇರಬಲ್ಲೆ"
ಈಗ ಆಶ್ಚರ್ಯವಾಗುವ ಸರದಿ ನನ್ನದು. ಎಲ್ಲರೊಡನೆಯೂ ಇರಬಲ್ಲೆ ಅಂತಾನೆ. ಏನಪ್ಪಾ ಇವನ ಕಥೆ.
" ಅಬ್ಬ ನನಗಂತೂ ನಿನ್ನಂತೆ ಇರುವುದು ಸಾಧ್ಯವೇ ಇಲ್ಲ. ಆದರೂ ನಿನ್ನ ಮಾತುಗಳಲ್ಲಿ ಒಂದು ಆಕರ್ಷಣೆಯಿದೆ. ನೂರಾರು ವರುಷ ಜೀವಿಸಿದ ಅನುಭವಗಳ ಭಂಡಾರವೇ ಇದೆ."
"ಹೌದು, ನಿನ್ನಂತಹ ನೂರಾರು ಪಯಣಿಗರಿಗೆ ಈ ಭವಸಾಗರದ ದಾರಿಯ ತೋರಿ, ಮುಕ್ತಿಯೆಡೆಗೆ ಕರೆದೊಯ್ಯಲೇ ನಾನು ಇರುವುದು. ನಿನ್ನಂತೆ ನೂರಾರು ಜನರ ಎದೆಯೊಳಗೆ ನೆಲೆನಿಂತು ಅವರನ್ನು ಪಾಲಿಸುತ್ತಿರುವುದು ನಾನೆ."
ಅಷ್ಟರಲ್ಲಿ ಮೂಡಣದಲ್ಲಿ ಸೂರ್ಯನ ಕಿರಣಗಳು ಮೂಡತೊಡಗಿತು. ಹತ್ತಿರದಲ್ಲೆಲ್ಲೋ ಗಂಟೆಯ ಸದ್ದು ಕೇಳತೊಡಗಿತು.
" ಸರಿ ನಾನಿನ್ನು ಹೊರಡುತ್ತೇನೆ. ನನ್ನನ್ನ ಕರೆಯುವ ಸದ್ದು ಕೇಳಿಸುತ್ತಿದೆ" ಅಂದ ಕೃಷ್ಣ.
" ಅಯ್ಯೋ, ನನ್ನನ್ನ ಹೀಗೆ ನಡು ದಾರಿಯಲ್ಲಿ ಬಿಟ್ಟು ಹೋಗಬೇಡ ಕೃಷ್ಣ. ನನ್ನ ಗೆಳೆಯನಾಗಿ ಎಂದೆಂದೂ ನನ್ನ ಜೊತೆ ನೀನಿರಬೇಕು" ಅಂತಂದೆ ಉಕ್ಕಿ ಬರುತ್ತಿರುವ ಅಳುವನ್ನ ತಡೆಯುತ್ತಾ.
ತಕ್ಷಣ ಬಂದು ಅಪ್ಪಿಕೊಂಡ ಕೃಷ್ಣ "ಅಯ್ಯೋ ಹುಚ್ಚಪ್ಪ, ನಾನೆಂದಿಗೂ ನಿನ್ನೊಳಗೇ ಇರುವೆ. ನೀನು ಕರೆದಾಗಲೆಲ್ಲ ಓಡಿ ಬರುತ್ತಾನೆ ಈ ನಿನ್ನ ಗೆಳೆಯ. ಯಾರು ನನ್ನನ್ನು ಪ್ರೀತಿಸುತ್ತಾರೊ ಅವರ ಕೈ ಎಂದಿಗೂ ಬಿಡುವುದಿಲ್ಲ." ಅಂದವನೇ ದೂರಾಗಿ ನಡೆದು ಬಿಟ್ಟ.
ಗಂಟೆಯ ಸದ್ದು ಜೋರಾಗಿ ಕೇಳಿಸುತ್ತಿತ್ತು. ಅತ್ತಲೇ ದಾಪುಗಾಲಿಕ್ಕುತ್ತಾ ನಡೆದಾಗ ಒಂದು ದೇವಾಲಯ ಕಣ್ಣಿಗೆ ಬಿತ್ತು. ಬಿರುಸಿನಿಂದ ಒಳ ನಡೆದು ನೋಡಿದಾಗ ಗರ್ಭಗುಡಿಯೊಳಗೊಂದು ಚಂದನೆಯ ಮೂರ್ತಿ. ಅದೇ ನೀಲ ಬಣ್ಣ, ಕೈಯಲ್ಲೊಂದು ಕೊಳಲು, ಶಿರದಲ್ಲಿ ನವಿಲ ಗರಿ, ಮುಖದಲ್ಲಿ ಅದೇ ಮಂದಹಾಸ.
ಕೃಷ್ಣನೊಡನೆ ಒಂದು ಪಯಣ
Reviewed by Murali Kadava
on
05:46:00
Rating:

No comments: